ಮಡಿಕೆಗಳು

	ಭೂಮಿಯಲ್ಲಿ ಶಿಲಾಸ್ತರಗಳೂ ಅಂಕುಡೊಂಕಾಗಿ ಅಥವಾ ಅಲೆಗಳೋಪಾದಿಯಲ್ಲಿ ಮುದುಡಿಕೊಂಡಿರುವಿಕೆ (ಪೋಲ್ಡ್ಸ್). ಪ್ರಕ್ಷುಬ್ಧತೆಗೆ ಒಳಪಟ್ಟ ಎಳೆಗಳಿರುವ ಜಲಜಶಿಲೆಗಳಲ್ಲಿ ಇವು ಬಲು ಚೆನ್ನಾಗಿ ರೂಪುಗೊಂಡಿರುತ್ತವೆ. ಭೂಮಿಯಲ್ಲಿ ಶಿಲಾಸ್ತರಗಳು ಲಂಬವಾಗಿ ಅಥವಾ ಪಕ್ಕಗಳಿಂದ ಒತ್ತರಿಸಲ್ಪಟ್ಟ ಭೂಚಲನವಲನ ಶಕ್ತಿಗಳಿಗೆ ಮಣಿಯ ಮಡಿಕೆಗಳಾಗುತ್ತವೆ. ಗಾತ್ರದಲ್ಲಿ ಮಡಿಕೆಗಳು ಒಂದು ಸೆಂಟಿಮೀಟರಿಗಿಂತ ಸಣ್ಣವಾಗಿಯೂ ಕೆಲವು ಸೆಂಟಿಮೀಟರಿನಿಂದ ಹಲವಾರು ಮೀಟರುಗಳಷ್ಟು ದೊಡ್ಡವಾಗಿಯೂ ಮತ್ತೆ ಹಲವು ಕೆಲವಾರು ಕಿಲೊಮೀಟರ್ ಅಗಲವಾಗಿಯೂ ಹತ್ತಾರು ಕಿಲೊಮೀಟರ್ ಉದ್ದವಾಗಿಯೂ ಇರುತ್ತವೆ. ಮಡಿಕೆಗಳಲ್ಲೆಲ್ಲ ಅತಿ ಸರಳವಾಗಿ ಒಂದು ಮಗ್ಗುಲಲ್ಲಿ ಮಾತ್ರ ಒಗ್ಗಿರುವ ಶಿಲಾಸ್ತರಕ್ಕೆ ಏಕ ಇಳಿಮುಖ (ಮೋನೊಕ್ಲೈನ್) ಮಡಿಕೆ ಎಂದು ಹೆಸರು.

	ಮಡಿಕೆಯ ಭಾಗಗಳು : ಮಡಿಕೆಯ ಎರಡು ಕಡೆಯ ಪಕ್ಕಗಳಿಗೆ ಪಾಶ್ರ್ವಗಳೆಂದು (ಲಿಂಬ್ಸ್) ಹೆಸರು. ಅಕ್ಷ ಸಪಾಟ (ಆ್ಯಕ್ಸಿಯಲ್ ಪ್ಲೇನ್) ಅಥವಾ ಅಕ್ಷ ಸಮಕ್ಷೇತ್ರ (ಆ್ಯಕ್ಸಿಯಲ್ ಸರ್ಫೇಸ್) ಮಡಿಕೆಯನ್ನು ಎರಡು ಸಮಭಾಗಗಳಾಗಿ ವಿಂಗಡಿಸುತ್ತದೆ. ಅಕ್ಷ ಸಮಕ್ಷೇತ್ರ ಮಡಿಕೆಯ ಮೇಲ್ಭಾಗದ ಸ್ತರವನ್ನು ಅಕ್ಷರೇಖೆಯಲ್ಲಿ ಛೇದಿಸುತ್ತದೆ. ಸಾಮಾನ್ಯವಾಗಿ ಅಕ್ಷರೇಖೆ ಏರು ಮತ್ತು ತಗ್ಗುಗಳಿಂದ ಕೂಡಿ ಮಡಿಕೆಯ ಉದ್ದಕೂ ಬದಲಾವಣೆಗೊಳ್ಳುತ್ತಿರುತ್ತದೆ. ಇದರ ಜಾಡಿನಲ್ಲಿ ಸಿಕ್ಕುವ ಉನ್ನತ ಭಾಗಗಳಿಗೆ ಏಣಿಗೆಗಳೆಂದೂ (ಕಲ್ಮಿನೇಶನ್ಸ್) ನಿಮ್ನ ಭಾಗಗಳಿಗೆ ತಗ್ಗುಗಳೆಂದೂ (ಡಿಪ್ರೆಶನ್ಸ್) ಹೆಸರು. ಮಡಿಕೆಗಳ ಅಕ್ಷರೇಖೆಯ ಮೇಲಿನಿಂದ ಸಮತಲ ಮಟ್ಟಕ್ಕೆ ಇರುವ ಕೋನ ಇಳಿಚಾಚು (ಪ್ಲಂಜ್). ಮಡಿಕೆಯ ಪಕ್ಕ ಭಾಗ ಅಥವಾ ಪಾಶ್ರ್ವ ಆ ಮಡಿಕೆಯ ಅಕ್ಷಸಪಾಟದಿಂದ ಮಗ್ಗುಲಿನ ಮಡಿಕೆಯ ಅಕ್ಷ ಸಮಕ್ಷೇತ್ರದವರೆಗೆ ಹಬ್ಬಿರುತ್ತದೆ. ಸಾಮಾನ್ಯವಾಗಿ ಮಡಿಕೆಯ ಬಗ್ಗಿರುವಿಕೆಯ ತ್ರಿಜ್ಯ ಅದರ ಅಲೆಯ ಉದ್ದ ಮತ್ತು ಅರೆಪಾರಗಳಿಗೆ (ಆ್ಯಂಪ್ಲಿಟ್ಯೂಡ್ಸ್) ಹೋಲಿಸಿದರೆ ಕಿರಿದಾಗಿರುತ್ತದೆ. ಅತಿಯಾಗಿ ಬಗ್ಗಿರುವ ಮಡಿಕೆಯ ಭಾಗಕ್ಕೆ ಕೀಲು ಎಂದು ಹೆಸರು. ಗೋಲಾಕಾರದ ಮಡಿಕೆಯ ಉನ್ನತ ಭಾಗ ಶಿಖರ. ಇದು ಮಡಿಕೆಯನ್ನು ಲಂಬವಾಗಿ ಛೇದಿಸಿದಲ್ಲಿ ಶಿಖರದ ಸಮಭಾಜಕತಲ ದೊರೆಯುತ್ತದೆ. ಮಡಿಕೆಯ ಅತ್ಯಂತ ತಗ್ಗು ಭಾಗಗಳನ್ನು ಕೂಡಿಸುವ ಭಾಗಕ್ಕೆ ದೊಣೆ ಅಥವಾ ಬಾನೆ ಎಂದೂ ಇದು ಮಡಿಕೆಯನ್ನು ಛೇದಿಸುವಲ್ಲಿಗೆ ದೊಣೆ ಸಮಭಾಜಕತಲ ಎಂದೂ ಹೆಸರು.

	ನಾಮಾಂಕಿತಗಳು : ಮಡಿಕೆಗಳನ್ನು ಅಡ್ಡವಾಗಿ ಕತ್ತರಿಸಿದಾಗ ತೋರುವ ರಚನಾ ವಿನ್ಯಾಸದ ಮೇರೆಗೆ ಅವನ್ನು ಹೆಸರಿಸಿದೆ. ಮಡಿಕೆಯೊಂದರ ಗೋಲಾಕಾರ ಮೇಲ್ಮುಖವಾಗಿದ್ದು ಅದರ ಪಾಶ್ರ್ವಗಳು ರೇಖೆಯಿಂದ ಕೆಳಮುಖವಾಗಿ ಬಾಗಿ, ಮೊದಲು ರೂಪುಗೊಂಡು ಹಳೆಯ ಶಿಲಾಸ್ತರಗಳು ಮಧ್ಯಭಾಗವನ್ನು ಆಕ್ರಮಿಸಿಕೊಂಡಿರುವಂಥವನ್ನು ಮಡಿಕೆಯೊಂದರ (ಆ್ಯಂಟಿಕ್ಲೈನ್) ಮಡಿಕೆಯೆನ್ನುವರು. ಬಟ್ಟಲಿನಾಕಾರವಾಗಿರುವ ಮಡಿಕೆಯೊಂದರ ಪಾಶ್ರ್ವಗಳು ಒಳಮುಖವಾಗಿ ಅಕ್ಷರೇಖೆಯೆಡೆಗೆ ಬಾಗಿ ನವೀನವಾಗಿ ರೂಪುಗೊಂಡ ಶಿಲಾಸ್ತರಗಳು ಮಧ್ಯಭಾಗದಲ್ಲಿರುವಂಥವನ್ನು ಏಕಮುಖಾವನತ (ಸಿಂಕ್ಲೈನ್) ಮಡಿಕೆ ಎಂದು ಕರೆಯುವರು. ಅರ್ಧಚಂದ್ರಾಕಾರವಾಗಿ ಬಗ್ಗಿರುವ ವಿಮುಖಾವನತ ಮಡಿಕೆಗಳ ತುತ್ತ ತುದಿಯ ಭಾಗಕ್ಕೆ ಮಡಿಕೆಯ ಏಣು ಎಂದೂ ಏಕಮುಖಾವನತ ಮಡಿಕೆಯ ಅತ್ಯಂತ ಕೆಳಗಿನ ಭಾಗಕ್ಕೆ ಮಡಿಕೆಯ ತಗ್ಗು ಎಂದೂ ಹೆಸರು.

	ಭೂಚಲನೆಯಿಂದ ಉಂಟಾದ ದೊಡ್ಡ ದೊಡ್ಡ ಮಡಿಕೆಗಳಲ್ಲಿ ಅನಂತರದ ಭೂಚಲನಾ ಒತ್ತಡದಿಂದ ಉದಿಸಿದ ಸಣ್ಣ ಪ್ರಮಾಣದ ಅಥವಾ ಗಾತ್ರದಲ್ಲಿ ಚಿಕ್ಕದಾಗಿರುವ ಮಡಿಕೆಗಳನ್ನು ಸಣ್ಣ ಮಡಿಕೆಗಳೆಂದು ಕರೆಯತ್ತಾರೆ. ಇವುಗಳ ಜೊತೆಯಲ್ಲಿ ಶಿಲಾಸ್ತರಗಳಲ್ಲಿ ಉದ್ಭವಿಸಿದ ಒಡಕು ಮತ್ತು ಬಿರುಕುಗಳಿಗೆ ಸೀಳು ರೇಖೆಗಳೆಂದು ಹೆಸರು. ಭೂಚಲನೆಯಿಂದ ಉಂಟಾಗುವ ಸೀಳು ರೇಖೆಗಳು ಆಯಾ ಆವರ್ತದ ಮಡಿಕೆಗಳ ಅಕ್ಷರೇಖೆಗಳಿಗೆ ಸಮಾಂತರವಾಗಿ ಸಂಕೀರ್ಣಗೊಂಡಿರುತ್ತವೆ. ಸಣ್ಣ ಮಡಿಕೆಗಳೂ ಸಮರೂಪತೆ ಮತ್ತು ಸಮಪ್ರಮಾಣದವುಗಳಾಗಿದ್ದರೂ ಮೊದಲಿನ ಆವರ್ತದ ಮಡಿಕೆಗಳಿಗಿಂತ ಸ್ಥಾನ ಮತ್ತು ರೂಪಗಳಲ್ಲಿ ಭಿನ್ನವಾಗಿರುತ್ತವೆ. ಮಡಿಕೆಗಳ ಮೇಲೆ ಉಂಟಾದ ಭೂಚಲನಾ ಒತ್ತಡದ ಪರಿಣಾಮವನ್ನು ಜಲಜಶಿಲೆಗಳ ಅಕ್ಷಪ್ರದೇಶದ ಮೇಲೆ ರೂಪುಗೊಂಡ ಸಣ್ಣ ಮಡಿಕೆಗಳ ಅಧ್ಯಯನದಿಂದ ನಿರೂಪಿಸಬಹುದು. ಸಣ್ಣ ಮಡಿಕೆಗಳ ಮಾದರಿಗಳನ್ನು ರೂಪಿಸಿ ಅವನ್ನು ಪ್ರಯೋಗಶಾಲೆಯಲ್ಲಿ ಒತ್ತಡಕ್ಕೆ ಮಣಿಸುವುದರ ಮೂಲಕ ಉಂಟಾಗುವ ಮಡಿಕೆಗಳ ಅಧ್ಯಯನದಿಂದ ಹಲವಾರು ಮಡಿಕಾ ಸೂಕ್ತಿಗಳು ಮತ್ತು ಪ್ರಮೇಯಗಳು ರೂಪಿಸಲ್ಪಟ್ಟಿವೆ. ಇಷ್ಟೇ ಅಲ್ಲದೆ ಗಣಕದ ಸಹಾಯದಿಂದ ನಿಷ್ಕøಷ್ಟ ಯೋಜನೆಗಳಿಗೆ ಸರಿಹೊಂದುವ ಗಣಿತ ಸೂತ್ರಗಳನ್ನು ಅಳವಡಿಸಿ, ಮಡಿಕೆಗಳು ರೂಪುಗೊಳ್ಳಲು ಅವಶ್ಯವಾಗುವ ಭೌತಗುಣಗಳು ಮತ್ತು ಸೀಮಿತ ಪರಿಸರ ಇವನ್ನು ನಿರ್ಮಿಸಿ ವಿವಿಧ ರೀತಿಯ ಮಡಿಕೆಗಳು ಉಂಟಾಗುವ ವಿವರಣೆಯನ್ನು ಪಡೆದಿದ್ದಾರೆ.

	ವಿಭಿನ್ನ ಮಡಿಕೆಗಳು : ಜಲಜ ಶಿಲಾಸ್ತೋಮಗಳು ಪ್ರಸರಿಸಿರುವ ಪ್ರದೇಶಗಳಲ್ಲಿ ಭೂಚಲನ ವಲನಗಳು ಅತಿ ಹೆಚ್ಚಿನ ಕಾಲದ ತನಕ ಚಟುವಟಿಕೆಯಿಂದಿದ್ದು ಹಲವಾರು ಮಡಿಕೆಜನ್ಯ ಆವರ್ತನಗಳು ಶಿಲಾಸ್ತೋಮಗಳಮೇಲೆ ಪರಿಣಾಮಕಾರಿಯಾಗಿ ಒತ್ತರಿಸಿದಾಗ ಅನೇಕ ತರಹದ ವಿಭಿನ್ನ ರೀತಿಯ ಮಡಿಕೆಗಳು ಮೈದಳೆಯುತ್ತವೆ. ಈ ರೀತಿ ಉದ್ಭವಿಸಿದ ಮಡಿಕೆಗಳ ಆವರ್ತನಗಳನ್ನು ವಿವಿಧ ರೀತಿಯ ಮಡಿಕೆಗಳ ಸಂಬಂಧದ ಹೊಂದಾಣಿಕೆಯ ಮೇರೆಗೆ ಕಂಡುಹಿಡಿಯಬಹುದು. ಮೊದಲನೆಯ ಆವರ್ತನದಲ್ಲುಂಟಾದ ಮಡಿಕೆಗಳ ಅಕ್ಷಪ್ರದೇಶ ಮತ್ತು ಅಕ್ಷಸಪಾಟಗಳು ಅನಂತರದ ಭೂಚಲನ ಆವರ್ತನದ ಒತ್ತಡಗಳಿಂದ ಪುನಃ ಮಡಿಕೆಗೊಂಡು ಮತ್ತು ಭೂಚಲನ ಆವರ್ತನಗಳು ಚಟುವಟಿಕೆಗೊಂಡು ಒತ್ತರಿಸಿದಾಗ ಪುನಃ ಮಡಿಚಿ, ತಿರುಚಿ ಅಥವಾ ಮುದುಡಿಕೊಂಡಿರುತ್ತವೆ. ಆದರೆ ಕೊನೆಯ ಹಂತದ ಆವರ್ತನದ ಮಡಿಕೆಗಳು ಯಾವ ರೀತಿಯ ವಿಕಾರ ಮತ್ತು ತಿರುಚುಗಳನ್ನೂ ಹೊಂದಿರುವುದಿಲ್ಲ. ಭೂಮಿಯಲ್ಲಿ ಬೇರೆ ಬೇರೆ ಭೂಕಾಲಮಾನದಲ್ಲಾದ ಮಡಿಕೆಗಳು ಒಂದರ ಮೇಲೊಂದೆರಗಿ ಪುನಃ ಪುನಃ ಅವುಗಳ ರೂಪ ಮತ್ತು ವಿನ್ಯಾಸಗಳಲ್ಲಿ ಪರಿವರ್ತನೆಗೊಂಡಿರುತ್ತವೆ. ವಿವಿಧ ಆವರ್ತನ ಮಡಿಕೆಗಳ ಭೂಕಾಲಮಾನ ಅಥವಾ ವಯಸ್ಸನ್ನು ಶೋಧಿಸಬೇಕಾದ ಸಂದರ್ಭಗಳಲ್ಲಿ, ಮೇಲೊತ್ತರಿಸಿಕೆಯಿಂದ ಉಂಟಾದ ಮಡಿಕೆಗಳ ಸಂಬಂಧವನ್ನು ಮೊದಲೇ ಉಂಟಾಗಿದ್ದ ಮಡಿಕೆಗಳೊಡನೆ ವಿಶ್ಲೇಷಿಸಿ ನಿಗದಿಪಡಿಸಬಹುದು. ಹೀಗೆ ಒಂದು ಪ್ರಾಂತದ ಮಡಿಕೆಗಳ ವಯಸ್ಸನ್ನು ದೃಢೀಕರಿಸಿದ ಬಳಿಕ ಅವುಗಳ ವಿನ್ಯಾಸವನ್ನು ಇತರ ಪ್ರದೇಶಗಳಲ್ಲಿ ಕಂಡುಬರುವ ಮಡಿಕೆಗಳ ಜೊತೆ ತುಲನಾತ್ಮಕವಾಗಿ ಪರಿಶೀಲಿಸಿ ಅವುಗಳ ವಯಸ್ಸನ್ನು ನಿರ್ಧರಿಸಬಹುದು. ಮೇಲೊತ್ತರಿಸಿಕೆಗೆ ಒಳಗಾದ ಮಡಿಕೆಗಳ ಸಂಕೀರ್ಣ ಮುಖ್ಯವಾಗಿ ಭೂಚಲನವಲನಗಳಿಂದುಂಟಾದ ಒತ್ತಡದ ಪರಿಸ್ಥಿತಿಯನ್ನು ಅನುಸರಿಸಿರುತ್ತದೆ ಮಡಿಕೆಗೊಂಡ ಶಿಲಾಸ್ತರಗಳ ಗುಣ ವಿಶೇಷಗಳನ್ನೂ ಅವಲಂಬಿಸಿರುತ್ತದೆ.

	ಮಡಿಕೆಯ ಸಮೂಹಗಳು : ಮಹಾಬೋಗುಣಿಯಲ್ಲಿ ಸಂಚಯನಗೊಂಡ ಜಲಜ ಶಿಲಾಸ್ತೋಮಗಳು ಭೂಚಲನವಲನದಿಂದ ಒತ್ತಡ ಮೇಲೆತ್ತಲ್ಪಟ್ಟಾಗ ಮಡಿಕೆಗಳು ಸಾಮಾನ್ಯವಾಗಿ ಉಂಟಾಗುವುವು. ಇವು ಒಂಟಿಯಾಗಿರುವುದಿಲ್ಲ. ಭೂಕವಚಕ್ಕೆ ತೊಡಿಸಿದ ಮಾಲೆಗಳಂತೆ ಹಲವಾರು ಚದರ ಕಿಲೊಮೀಟರ್ ಕೆಲವು ವೇಳೆ ನೂರಾರು ಕಿಲೊಮೀಟರ್ ಉದ್ದಕ್ಕೂ ಅಗಲಕ್ಕೂ ಪ್ರಚಂಡವಾಗಿ ಗುಂಪು ಗುಂಪಾಗಿ ಹರಡಿರುತ್ತವೆ. ಮಡಿಕೆಯ ಸಮೂಹಗಳು ಸಾಧಾರಣವಾಗಿ ಅನೇಕ ಬಗೆಯ ರಚನಾ ವಿನ್ಯಾಸಗಳಿಂದ ಕೂಡಿ ವಿವಿಧ ರೀತಿಯ ಸಣ್ಣ ಪುಟ್ಟ ಮಡಿಕೆಗಳು ಅಗಾಧ ಪ್ರಮಾಣದಲ್ಲಿ ದೊಡ್ಡ ದೊಡ್ಡ ಮಡಿಕೆಗಳ ಪಾಶ್ರ್ವಗಳಲ್ಲಿ ರೂಪುಗೊಂಡಿರುತ್ತವೆ. ಇಂಥ ಒಂದು ಬೃಹತ್ ವಿಮುಖಾವನತ (ಆ್ಯಂಟಿಕ್ಲೈನೋರಿಯಮ್) ಎಂದು ಕರೆಯುತ್ತಾರೆ. ಇದೇ ರೀತಿ ಅನೇಕ ಸಣ್ಣ ಮಡಿಕೆಗಳನ್ನು ಒಳಗೊಂಡಿರುವ ಅಗಾಧವಾದ ಏಕಮುಖಾವನತ ಮಡಿಕೆಯನ್ನು ಏಕಮುಖಾವನತ ಮಡಿಕಾಸರಣಿ (ಸಿಂಕ್ಲೈನೋರಿಯಮ್) ಎನ್ನುವರು. ಮಡಿಕೆಯ ಸಮೂಹಗಳಲ್ಲಿಯ ಸಣ್ಣ ಮಡಿಕೆಗಳ ಜನನ ಸಂಬಂಧ ಎಷ್ಟೇ ಜಟಿಲವಾಗಿದ್ದರೂ ಅವುಗಳ ಅಕ್ಷರೇಖೆಗಳ ಜಾಡು ಮಾತ್ರ ಪರಸ್ಪರ ಸಮಾಂತರವಾಗಿರುವುವು. ಕೆಲವು ಪ್ರದೇಶಗಳಲ್ಲಿ ಹಲವಾರು ಆವರ್ತನದ ಮಡಿಕೆಗಳಿದ್ದರೆ ಅಂಥ ಕಡೆಗಳಲ್ಲಿ ಸಣ್ಣ ಮಡಿಕೆಗಳ ಅಕ್ಷರೇಖೆಗಳ ಜಾಡು ಅಸ್ತವ್ಯಸ್ತಗೊಂಡು ಭೂಚಲನವಲನ ಅನುಸರಿಸಿ ವಿವಿಧ ರೀತಿಯ ತಿರುವುಗಳನ್ನು ಹೊಂದಿರುತ್ತವೆ.		
 (ಎಂ.ಜೆ.ಸಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ